ಬೆಳೆ ಸಾಲ ಮಿತಿ ₹5 ಲಕ್ಷಕ್ಕೆ ಏರಿಕೆ! ನಿಧಿ ಬಿಡುಗಡೆಗೆ ಸರ್ಕಾರದ ಖಜಾನೆ ಖಾಲಿ
ಸರಕಾರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಾಲದ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿತ್ತು. ಆದರೆ ಈ ಬಗ್ಗೆ ಅಧಿಕೃತ ಆದೇಶ ನೀಡದ ಕಾರಣ ಸಹಕಾರ ಸಂಘ ಹಾಗೂ ರೈತರಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು. ಇದೀಗ ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡುವ ಬೆಳೆ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಹಾಗೂ ಈ ಸಾಲಕ್ಕೆ ಹೆಚ್ಚಿನ ದಾಖಲೆಗಳ ಅಗತ್ಯವೂ ಇರುವುದಿಲ್ಲ.
ಮಧ್ಯಮಾವಧಿ, ದೀರ್ಘಾವಧಿ ಸಾಲಮಿತಿಯೂ ಏರಿಕೆ:
ಶೇ. 3 ಬಡ್ಡಿ ದರದಲ್ಲಿ ರೈತರಿಗೆ ನೀಡುತ್ತಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಮಿತಿಯನ್ನು ರೂ. 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದೆ. ಮಧ್ಯಮಾವಧಿ ಸಾಲ ಐದು ವರ್ಷ ಹಾಗೂ ದೀರ್ಘಾವಧಿ ಸಾಲ ಪಾವತಿಗೆ ಹತ್ತು ವರ್ಷಗಳ ಅವಧಿ ಇರುತ್ತದೆ. ಪ್ರತಿ ವರ್ಷ ಸಮಾನ ಕಂತುಗಳಲ್ಲಿ ರೈತರು ಈ ಸಾಲವನ್ನು ಶೇ. 3 ಬಡ್ಡಿ ದರದೊಂದಿಗೆ ಮರು ಪಾವತಿಸಬೇಕು. ನಿಗದಿತ ಅವಧಿಯೊಳಗೆ ಸಾಲವನ್ನು ಮರುಪಾವತಿಸದಿದ್ದರೆ ಬಡ್ಡಿ ದರ ಹೆಚ್ಚುತ್ತದೆ.
ಭೂ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಕೃಷಿ ಯಂತ್ರೋಪಕರಣ ಖರೀದಿ, ನೀರಾವರಿ ವ್ಯವಸ್ಥೆ, ಜಾನುವಾರು ಸಾಕಣೆ, ಹೈನುಗಾರಿಕೆ, ಕೆರೆ, ಕೊಳವೆಬಾವಿ ನಿರ್ಮಾಣ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಈ ಸಾಲವನ್ನು ಪಡೆಯಬಹುದು. ಇದಕ್ಕೆ ಕೇವಲ ಶೇ .3ರ ಬಡ್ಡಿ ದರ ಇರುವ ಕಾರಣದಿಂದ ಇದು ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಶೂನ್ಯ ಬಡ್ಡಿ ದರದ ಸಾಲವನ್ನು ಪಡೆದ ರೈತರು ಹೆಚ್ಚುವರಿಯಾಗಿ ಇದನ್ನು ಪಡೆಯಬಹುದಾಗಿದೆ. ಇದಕ್ಕೆ ಒಂದಿಷ್ಟು ಹೆಚ್ಚಿನ ದಾಖಲೆಗಳ ಅಗತ್ಯವಿದೆ.
ಇದನ್ನೂ ಸಹ ಓದಿ : ನಾಳೆ ಬೆಂಗಳೂರು ಬಂದ್..! ಏನಿರುತ್ತೆ? ಏನಿರಲ್ಲ?
ಅಗತ್ಯವಿರುವ ಹಣದ ಗೊಂದಲ:
ಬೆಳೆಸಾಲ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳ ಮಿತಿಯನ್ನು ಸರಕಾರ ಹೆಚ್ಚಿಸುವ ಆದೇಶ ಹೊರಡಿಸಿದ್ದರೂ, ಇದನ್ನು ನೀಡಲು ಅಗತ್ಯವಿರುವ ನಿಧಿಯನ್ನು ಬಿಡುಗಡೆ ಮಾಡಿಲ್ಲ. ಇದರಿಂದ ತಕ್ಷಣಕ್ಕೆ ಹೆಚ್ಚಿಸಿರುವ ಮೊತ್ತದ ಸಾಲ ಪಡೆಯುವಲ್ಲಿ ಸಮಸ್ಯೆ ಇರಲಿದೆ. ಸಹಕಾರಿ ಸಂಘಗಳು ತಮ್ಮ ಸ್ವಂತ ನಿಧಿಯಿಂದ ಸಾಲ ವಿತರಿಸಿದರೂ ಅದು ಸಂಘಗಳ ಉಳಿದ ವ್ಯವಹಾರಗಳಿಗೆ ತೊಡಕಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚುವರಿ ಮಿತಿಯ ಸಾಲ ವಿತರಿಸಲು ಸಹಕಾರಿ ಸಂಘಗಳು ಸದ್ಯ ಹಿಂದೇಟು ಹಾಕುತ್ತಿವೆ. ಈ ಕಾರಣದಿಂದ ಹೆಚ್ಚಿಗೆ ಮಿತಿಯ ಸಾಲ ನೀಡಲು ಸಹಕಾರಿ ಸಂಘಗಳಿಗೆ ಕೂಡಲೇ ನಿಧಿ ಬಿಡುಗಡೆ ಮಾಡುವ ಅಗತ್ಯವಿದೆ.
ಸರ್ಕಾರಕ್ಕೆ ಮನವಿ:
ಈಗಾಗಲೇ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ ರೂ. 3 ಲಕ್ಷ ಪಡೆದಿರುವ ರೈತರಿಗೆ ಹೆಚ್ಚುವರಿ ರೂ. 2 ಲಕ್ಷ ಮೊತ್ತದ ಸಾಲ ನೀಡಬೇಕಾದರೆ ಈ ಹಿಂದೆ ಪಡೆದ ರೂ. 3 ಲಕ್ಷ ಸಾಲದ ಅವಧಿ ಪೂರ್ಣಗೊಳ್ಳದ ರೈತರು ಸಾಲವನ್ನು ಮರುಪಾವತಿಸದೆ ಹೆಚ್ಚಳವಾದ ರೂ. 2ಲಕ್ಷ ನೀಡಬೇಕು ಎಂಬುದು ರೈತರ ಆಗ್ರಹವಾಗಿದ್ದು, ಈ ಬಗ್ಗೆ ಸಹಕಾರಿ ಸಂಘಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ.
“ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುವ ಸಾಲಗಳ ಮಿತಿ ಹೆಚ್ಚಳದ ಆದೇಶ ಬಿಡುಗಡೆಗೊಂಡಿದ್ದರೂ, ಸದ್ಯದ ಸ್ಥಿತಿಯಲ್ಲಿ ಸಂಘಗಳ ಸ್ವಂತ ನಿಧಿಯಿಂದ ನೀಡುವುದು ಕಷ್ಟ ಸಾಧ್ಯ. ಹೆಚ್ಚಳವಾದ ಸಾಲಕ್ಕೆ ಬೇಕಾದ ಅಗತ್ಯ ನಿಧಿಯನ್ನು ಸರಕಾರ ಬಿಡುಗಡೆಗೊಳಿಸಬೇಕು.