ಲಿಂಗನಮಕ್ಕಿಯಲ್ಲಿ ಇನ್ನು 150 ದಿನ ಮಾತ್ರ ವಿದ್ಯುತ್ ಉತ್ಪಾದನೆ; ಕೆಪಿಸಿ ಅಧಿಕಾರಿಗಳ ಅಂದಾಜು, ಬೇಸಿಗೆಯಲ್ಲಿ ಸ್ಥಿತಿ ಗಂಭೀರ!
ಏಷ್ಯಾದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯದ ಲಿಂಗನಮಕ್ಕಿ ಜಲವಿದ್ಯುತ್ ಉತ್ಪಾದನೆ ಘಟಕ ಈ ವರ್ಷ ಮುಂಗಾರು ಕೊರತೆಯಿಂದಾಗಿ ನೀರಿನ ಅಭಾವ ಎದುರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ ಗಣನೀಯವಾಗಲಿದೆ. ತನ್ನ ಸಾಮರ್ಥ್ಯದ ಶೇ. 40 ರಷ್ಟು ಮಾತ್ರ ವಿದ್ಯುತ್ ಉತ್ಪಾದನೆಯಾಗುವಷ್ಟು ನೀರು ಸಂಗ್ರಹವಾಗಿದೆ.

68.205 ಟಿ.ಎಂ.ಸಿ ನೀರು ಲಭ್ಯ:
ಈ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ 1787 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠಮಟ್ಟ 1819 ಅಡಿ ಇದ್ದು, ಕಳೆದ ವರ್ಷ ಇದೇ ವೇಳೆಗೆ 1814 ಅಡಿ ನೀರು ಸಂಗ್ರಹವಾಗಿದ್ದರಿಂದ ವಿದ್ಯುತ್ ಉತ್ಪಾದನೆಗೆ ಅಡ್ಡಿ ಆಗಿರಲಿಲ್ಲ. ಈ ವರ್ಷ ಆಣೆಕಟ್ಟು ಭರ್ತಿಯಾಗದೆ ಕೇವಲ 68.205 ಟಿಎಂಸಿ ನೀರು ಲಭ್ಯ ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.
ಕೇವಲ 150 ದಿನಗಳವರೆಗೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಬಹುದು ಎಂಬುದು ಕೆಪಿಸಿ ಅಧಿಕಾರಿಗಳ ಅಂದಾಜು ಲೆಕ್ಕಾಚಾರವಾಗಿದೆ. ಇನ್ನು ಮೂರು ತಿಂಗಳು ಈಗಿರುವ ರೀತಿಯಲ್ಲಿಯೇ ವಿದ್ಯುತ್ ಉತ್ಪಾದನೆ ಮಾಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಬೇಡಿಕೆ ಹೆಚ್ಚಾದರೆ ಮೂರು ತಿಂಗಳೊಳಗೆ ನೀರು ಖಾಲಿಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಇದನ್ನೂ ಸಹ ಓದಿ: ಮೈಸೂರು ದಸರಾವನ್ನು ಉದ್ಘಾಟಿಸಿದ ಸಂಗೀತ ನಿರ್ದೇಶಕ ಹಂಸಲೇಖ; ಕರ್ನಾಟಕದ ಐ-ದಶ ಆಚರಣೆಗೆ ಚಾಲನೆ
ಕಡಿಮೆ ನೀರು ಸಂಗ್ರಹ:
ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅತಿ ಕಡಿಮೆ ನೀರು ಈ ಬಾರಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಶೇ.96.6 ರಷ್ಟಕ್ಕೆ ಪ್ರತಿಯಾಗಿ ಈ ವರ್ಷ ಶೇ.45.4 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.
ನೀರಿಗೂ ತತ್ವಾರ ಸಾಧ್ಯತೆ:
ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಿಂದ ಸಾಗರ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಬಹುತೇಕ ಮಲೆನಾಡಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತ ಮಾಡಲಾಗಿದೆ. ಈ ವರ್ಷ ಆಣೆಕಟ್ಟಿನಲ್ಲಿ ನೀರು ಇಲ್ಲದ ಕಾರಣ ಇಲ್ಲೆಲ್ಲ ನೀರಿನ ಕೊರತೆ ಆಗುವ ಸಾಧ್ಯತೆ ಹೆಚ್ಚಾಗಿದೆ.